
ಮನುಷ್ಯನ ಅಭ್ಯುದಯಕ್ಕೆ ಆಹಾರಪದ್ದತಿಯು ಕೊಡುಗೆ ನೀಡುವುದೆಂದಾದರೆ, ಹೊಟ್ಟೆಗೆ ನೀಡುವ ಆಹಾರಕ್ಕಿಂತ ಇಂದ್ರಿಯಗಳಿಗೆ ಉಣಬಡಿಸುವ ಆಹಾರವು ಬಹಳಷ್ಟು ಮುಖ್ಯವಾದ ಪಾತ್ರ ವಹಿಸುತ್ತದೆ. ಆ ಇಂದ್ರಿಯಗಳಲ್ಲಿ ಒಂದಾದ ಕರ್ಣೇoದ್ರಿಯಕ್ಕೆ ನಾವು ಎಂತಹ ವಿಚಾರದಾಹಾರವನ್ನು ಉಣಬಡಿಸುತ್ತೇವೆ ಎಂಬುದು ನಮಗೆ ತಿಳಿದಿರುವುದಿಲ್ಲ. ಮಾನವನು ಜೀವನವೆಂಬ ರಹದಾರಿಯಲ್ಲಿ ಸಂಚರಿಸುವಾಗ ಬುದ್ಧಿಯೆಂಬ ಕಂದೀಲು ಬೆಳಕನ್ನು ಆಶ್ರಯಿಸುವುದಕ್ಕಿಂತ ಭಾವನೆಗಳ ಬುಡ್ಡೀದೀಪದ ಮೊರೆ ಹೋಗುತ್ತಾನೆ. ಕೇಳಿದ ವಿಚಾರಗಳನ್ನೆಲ್ಲಾ ಸತ್ಯವೆಂದು ಒಪ್ಪಿಕೊಂಡು ಅಂತೆಯೇ ಅವಸರದ ನಿರ್ಧಾರಗಳನ್ನು ಕೈಗೊಂಡು ಮೌಲ್ಯಯುತವಾದ ಸಂಬಂಧಗಳಿಗೆ ತಿಲಾಂಜಲಿ ಹೇಳಿ ಅನಾಹುತಗಳನ್ನು ಮಾಡಿಕೊಳ್ಳುವ ನಮಗೆ ಇಲ್ಲಿ ವಿವರಿಸಲಾಗಿರುವ ತಂತ್ರವು ಇದರಿಂದ ಹೊರಬರಲು ಸಹಾಯಮಾಡುತ್ತದೆ. ನಾವು ಶ್ರವಣಿಸುವ ವಿಚಾರಗಳನ್ನು ಆಲಿಸಿ, ಪರಿಶೀಲಿಸಿ ಮತ್ತು ಶೋಧಿಸಿ ಸತ್ಯವನ್ನು ತಿಳಿದುಕೊಳ್ಳುವ ಉಪಾಯದ ಬಗ್ಗೆ ಅರಿವುಮೂಡಿಸುವ ಪ್ರಯತ್ನವೇ “ಡಾ.ಶ್ರೀ ರಾಮಚಂದ್ರ ಗುರೂಜಿ”ಯವರ ಈ “ತ್ರಿತಂತ್ರ ಶೋಧಿತ ಸತ್ಯ” ಎಂಬ Yoglet ನ 7 ನೆಯ ಮಾಲಿಕೆ.