
ಆನಂದದಿಂ ಜನಿಸಿ, ಆನಂದದೊಳು ಬೆಳೆದು
ಆನಂದವನೆ ಸೇರುವೆವು ಕಡೆಯೊಳೆಲೆ ಜೀವ
ನೀನೇಕೆ ಅಳುತಿಹೆ! ಮುಂಜಾನೆ ಮಂಜಿನೊಳು
ಗಾನವಂ ಪಾಡುವುದು ಕಮನೀಯ ಕೋಕಿಲೆಯು,
ಧರಣಿಯಂ ತೇಜದಿಂ ತುಂಬಿಬರುವನು ರವಿಯು,
ಹರಿಣಾಂಕ ಬೆಳಗುವನು ತಿಮಿರಿವನು ಹಾಲುಮಯ
ಕಿರಣದಿಂ, ಪುಷಗಳು ಕಾನನವ ಸಲೆ ಮುತ್ತಿ
ಮೆರೆಯುವುವು ಪಡೆ ಮುದವ ಪ್ರಕೃತಿಯೊಳು, ಎಲೆ ಜೀವ!
ಕಾನನದ ರೂಪಿನಿಂ ಪರ್ವತದ ರೂಪಿನಿಂ
ಆನಂದ ಮೆರೆಯುತಿದೆ! ಫಲಪುಷ್ಪಬಳ್ಳಿಗಳು,
ಗಾನವನು ಸಲೆ ಕೊಡುವ ಸಂಗೀತ ಕೋವಿದನು,
ಕವಿವರನು ಎಲ್ಲರುಂ ರೂಪುದಳೆದಾನಂದ!
ಭವನವನು ನಾಕವನು ಅತಳಪಾತಾಳವನು
ಸವಿಯಾದ ವಿಶ್ವವನೆ ಆನಂದ ತುಂಬಿಹುದು!
ಕವಿ: ಕುವೆಂಪು
Relevant link:
https://shodhganga.inflibnet.ac.in/bitstream/10603/132046/11/11_appendix.pdf